ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ `ವೀರ ಕಂಬಳ’ ಚಿತ್ರ ಇದೇ ಫೆಬ್ರವರಿ 27ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಬಿಡುಗಡೆಯ ಕ್ಷಣಗಳು ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ವೀರ ಕಂಬಳದ ಒಡಲಿನಲ್ಲಿರುವ ಒಂದೊಂದೇ ವೈಶಿಷ್ಟ್ಯಗಳನ್ನು ಚಿತ್ರತಂಡ ಜಾಹೀರು ಮಾಡುತ್ತಿದೆ. ವೀರ ಕಂಬಳ ರೂಪುಗೊಂಡಿದ್ದರ ಹಿಂದೆ ದಶಕಗಳಷ್ಟು ಸುದೀರ್ಘವಾದ ಕಥನವಿದೆ. ಸರಿಸುಮಾರು ಏಳುನೂರು ವರ್ಷಗಳಷ್ಟು ಐತಿಹ್ಯವಿರುವ ಕಂಬಳದ ಬಗ್ಗೆ ಇಂಚಿಂಚು ಮಾಹಿತಿಯನ್ನು ಕಲೆಹಾಕುವ ಮೂಲಕ ರಾಜೇಂದ್ರ ಸಿಂಗ್ ಬಾಬು ಅವರು ಈ ಸಿನಿಮಾವನ್ನು ರೂಪಿಸಿದ್ದಾರೆ. ಇದರಲ್ಲಿನ ಅತ್ಯಂತ ಮಹತ್ವದ ಪಾತ್ರವೊಂದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಣ್ಣ ಹಚ್ಚಿರೋದು ವಿಶೇಷ.
ವೀರೇಂದ್ರ ಹೆಗ್ಗಡೆ ಈ ಚಿತ್ರದಲ್ಲಿ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆಂಬ ವಿಚಾರ ವರ್ಷಗಳ ಹಿಂದೆಯೇ ಹೊರ ಬಂದಿತ್ತು. ಆದರೆ, ನಿರ್ದೇಶಕರಾಗಲಿ, ಚಿತ್ರತಂಡದವರಾಗಲಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಿಟ್ಟು ಕೊಡದೆ ಗೌಪ್ಯತೆ ಕಾಪಾಡಿಕೊಂಡಿದ್ದರು. ಆದರೀಗ ವೀರೇಂದ್ರ ಹೆಗ್ಗಡೆ ನಿರ್ವಹಿಸಿರೋ ಪಾತ್ರದ ಚಹರೆಗಳನ್ನು ನಿರ್ದೇಶಕರೇ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಜೊತೆಗೆ, ಸದರಿ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಂಡಿದ್ದರ ಹಿಂದಿರೋ ಅಂಶಗಳನ್ನೂ ಹಂಚಿಕೊಂಡಿದ್ದಾರೆ. ಕಂಬಳದ ಇತಿಹಾಸ ಅರಿಯುತ್ತಾ ಹೋದಂತೆಲ್ಲ ಅದಕ್ಕೂ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೂ ಇರುವ ಅವಿನಾಭಾವ ನಂಟಿನ ವಿಚಾರ ರಾಜೇಂದ್ರ ಸಿಂಗ್ ಬಾಬು ಅವರನ್ನು ಬೆರಗುಗೊಳಿಸಿತ್ತಂತೆ.
ಇದನ್ನೂ ಓದಿ: 45 Review: ತೆರೆಮೇಲೆ ಅಕ್ಷರಶಃ ಶಿವತಾಂಡವ, ಮೇಕಿಂಗ್ ಮೂಲಕವೇ ಮೈ ಜುಂ ಎನಿಸುವ ʻಜನ್ಯʼ
ಅದುವರೆಗೆ ತುಳುನಾಡ ಸೀಮೆಯ ಖಾಸಗಿ ಮನೋರಂಜನೆಯ ಕ್ರೀಡೆಯಾಗಿದ್ದ ಕಂಬಳವನ್ನು ಎಪ್ಪತ್ತರ ದಶಕದಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸಿದ್ದವರು ವೀರೇಂದ್ರ ಹೆಗ್ಗಡೆ. ಆ ನಂತರ ಅದು ಬೇರೆ ಬೇರೆ ರೂಪಗಳಲ್ಲಿ ರೂಪಾಂತರ ಹೊಂದಿ ಇಡೀ ಕರುನಾಡನ್ನೇ ಸೆಳೆದುಕೊಂಡಿತ್ತು. ಈ ಕಾರಣದಿಂದಲೇ ವೀರೇಂದ್ರ ಹೆಗ್ಗಡೆ ಈ ಸಿನಿಮಾದಲ್ಲಿನ ಮಹತ್ವದ ಪಾತ್ರ ಮಾಡಬೇಕೆಂಬ ಆಸೆಯೊಂದು ಬಾಬು ಅವರೊಳಗೆ ಚಿಗಿತುಕೊಂಡಿತ್ತು. ಕಂಬಳದ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಹೆಗ್ಗಡೆಯವರು ನಟಸಲು ಒಪ್ಪಿಗೆ ಸೂಚಿಸಿದ್ದರು. ಕಡೆಗೂ ಒಂದಿಡೀ ಸಿನಿಮಾದ ಆತ್ಮದಂಥಾ, ಮೌಲಿಕ ಸಂದೇಶವೊಂದನ್ನು ರವಾನಿಸುವ ಪಾತ್ರಕ್ಕೆ ವೀರೇಂದ್ರ ಹೆಗ್ಗಡೆ ಜೀವ ತುಂಬಿದ್ದಾರೆ. ಅವರ ಪಾತ್ರ ಕೂಡಾ ವೀರಕಂಬಳದ ಆಕರ್ಷಣೆಗಳಲ್ಲೊಂದಾಗಿದೆ ಎಂಬುದು ನಿರ್ದೇಸಕ ರಾಜೇಂದ್ರ ಸಿಂಗ್ ಬಾಬು ಅವರ ಅಭಿಪ್ರಾಯ.
ಇದನ್ನೂ ಓದಿ: Mark Review: ಆ 18 ಗಂಟೆ! ಕಿಚ್ಚ ಸುದೀಪ್ ನಟನೆಯ ʻಮಾರ್ಕ್ʼ ಸಿನಿಮಾ ಚಿತ್ರ ವಿಮರ್ಶೆ
ಹೆಗ್ಗಡೆಯವರೂ ಕೂಡಾ ಅತ್ಯಂತ ಸಂಭ್ರಮದಿಂದಲೇ ಈ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆಂಬ ಧನ್ಯತಾ ಭಾವ ಚಿತ್ರತಂಡದಲ್ಲಿದೆ. ಈ ಚಿತ್ರವನ್ನು ಬಾಬಾ’ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ಚೇತನ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ತುಳು ಭಾಷೆಯಲ್ಲಿಯೂ ಬಿಡುಗಡೆಗೊಳ್ಳಲಿರುವ ಸದರಿ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ. ವಿಜಯ್ ಕೊಡಿಯಾಲ್ಬೈಲ್ ಚಿತ್ರಕಥೆ ಸಂಭಾಷಣೆ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಆರ್.ಗಿರಿ ಛಾಯಾಗ್ರಹಣ, ಶ್ರೀನಿವಾಸ್ ಎಸ್ ಬಾಬು ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಕಲಾ ನಿರ್ದೇಶನ, ಕಾಂತ ಪ್ರಸಾದನ ಹಾಗೂ ಭಾಷಾ ಅವರ ವಸ್ತ್ರವಿನ್ಯಾಸವಿರುವ ವೀರ ಕಂಬಳ ಫೆಬ್ರವರಿ 27ರಂದು ತೆರೆಗಾಣಲಿದೆ.
